ನಿರಂತರ ಸುರಿಯುತ್ತಿರುವ ಮಳೆಗೆ ಕೆರೆ, ನದಿಗಳು ತುಂಬಿ ಹರಿಯುತ್ತಿದ್ದು, ರಸ್ತೆಯ ಪಕ್ಕದ ಕೆರೆಗೆ ಅಕಸ್ಮಿಕ ಬಿದ್ದು, ಕಾಲುಸಂಕ ದಾಟುವ ವೇಳೆ ಆಯತಪ್ಪಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಎರಡು ಘಟನೆಗಳು ಕುಂದಾಪುರದಲ್ಲಿ ನಡೆದಿದೆ.
ಮಂಗಳವಾರ ಸಂಜೆ 5:45ರ ಸುಮಾರಿಗೆ ಎಡಮೊಗೆ ಗ್ರಾಮದ ತೊಪ್ಲುಮನೆಯ ಶೇಷಾದ್ರಿ ಐತಾಳ್ (71) ಎಂಬವರು ತೋಟಕ್ಕೆ ತೆರಳಲೆಂದು ಮನೆಯ ಬಳಿ ಇರುವ ಕುಬ್ಜಾ ನದಿಗೆ ಅಡ್ಡಲಾಗಿ ಅಡಿಕೆ ತೋಟದೊಳಗೆ ಹಾಕಿಕೊಂಡಿದ್ದ ತಾತ್ಕಾಲಿಕ ಮರದ ಕಾಲುಸಂಕ ದಾಟುವ ವೇಳೆ ಅಕಸ್ಮಿಕವಾಗಿ ಆಯತಪ್ಪಿ ನದಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಎಂಟು ಅಡಿ ಆಳದ ಹರಿಯುವ ನೀರಿನ ಮುಂಡ್ಕನಓಲೆ ಪೊದೆಯ ನೀರಿನಲ್ಲಿ ಮುಳುಗಿದ್ದ ಐತಾಳ್‌ರ ಮೃತದೇಹವನ್ನು ರಾತ್ರಿ 10:45ರ ಸಮಾರಿಗೆ ಮೇಲಕ್ಕೆತ್ತಲಾಯಿತು.
ಅದೇ ರೀತಿ ಮಂಗಳವಾರ ರಾತ್ರಿ 11:30ರ ಸುಮಾರಿಗೆ ಕುಂದಾಪುರ ತಾಲೂಕಿನ ಉಳ್ತೂರು ಗ್ರಾಮದ ದಿನಕರ ಶೆಟ್ಟಿ (53) ಎಂಬವರು ಮನೆಗೆ ಬರುವ ಸಮಯದಲ್ಲಿ ಬೈಕ್ ಸ್ಕಿಡ್ ಆಗಿ ರಸ್ತೆಯ ಪಕ್ಕದಲ್ಲಿರುವ ಕೆರೆಗೆ ಬಿದ್ದು ಮೃತಪಟ್ಟಿರುವುದು ವರದಿಯಾಗಿದೆ. ಮಣೂರಿನ ಹೊಟೇಲ್ ಒಂದರಲ್ಲಿ ಕ್ಯಾಶಯರ್ ಆಗಿರುವ ದಿನಕರ ಶೆಟ್ಟಿ ಬೇಳೂರು ಗ್ರಾಮದ ಮೊಗೆಬೆಟ್ಟಿನವರು. ಇವರು ನಿನ್ನೆ ಕೆಲಸ ಮುಗಿಸಿ ಹೆಂಡತಿಯ ಮನೆಯಾದ ಉಳ್ತೂರು ಗ್ರಾಮದ ಮಲ್ಯಾಡಿಗೆ ತೆರಳುತಿದ್ದಾಗ ಮನೆಯ ಬಳಿ ಇರುವ ಕೆರೆ ಮಳೆಯಿಂದ ತುಂಬಿದ್ದು ಪಕ್ಕದ ಮಣ್ಣಿನ ರಸ್ತೆಗೂ ನೀರು ಹರಿಯುತಿದ್ದು ಕತ್ತಲಲ್ಲಿ ಅರಿಯದೇ ನೀರಿನ ಹೊಂಡಕ್ಕೆ ಬೈಕ್ ಸಮೇತ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ
0 Comments